ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದ ಭೀಕರ ಕುಟುಂಬ ಹತ್ಯಾಕಾಂಡ ಪ್ರಕರಣಕ್ಕೆ ಇದೀಗ ಹೊಸ ಆಯಾಮ ಸಿಕ್ಕಿದೆ. ಆರಂಭದಲ್ಲಿ ಈ ಕೃತ್ಯದ ಹಿಂದೆ ಆನ್ಲೈನ್ ಗೇಮ್ ವ್ಯಸನ ಕಾರಣ ಎಂಬ ಮಾತುಗಳು ಕೇಳಿಬಂದಿದ್ದರೂ, ಪೊಲೀಸರ ತನಿಖೆಯಲ್ಲಿ ಬೇರೆ ಚಿತ್ರಣ ಹೊರಬಂದಿದೆ.
ಕಳೆದ ಶನಿವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ 19 ವರ್ಷದ ಪ್ರಗತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ತಂದೆ ವೆಂಕಟ್ ನಾಯ್ಡು ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಸೌಜನ್ಯ ಮತ್ತು ಘಟನೆಗೆ ಕಾರಣ ಎನ್ನಲಾದ ಅಪ್ರಾಪ್ತ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆನ್ಲೈನ್ ಗೇಮ್ ಚಟವೇ ಈ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಬಾಲಕನ ಮನಸ್ಥಿತಿ ಹಾಗೂ ಕುಟುಂಬದೊಳಗಿನ ಶಿಕ್ಷಣ ಸಂಬಂಧಿತ ಭಿನ್ನಾಭಿಪ್ರಾಯವೇ ದುರಂತದ ಮೂಲ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಬಾಲಕನಿಗೆ ಜೀವಶಾಸ್ತ್ರ (ಬಯಾಲಜಿ) ವಿಭಾಗದಲ್ಲಿ ಮುಂದುವರೆಯುವ ಆಸೆ ಇತ್ತು. ಆದರೆ ಕುಟುಂಬ ಸದಸ್ಯರು ಅವನ ಇಚ್ಛೆಗೆ ವಿರುದ್ಧವಾಗಿ ಕಂಪ್ಯೂಟರ್ ಸೈನ್ಸ್ ಕೋರ್ಸ್ಗೆ ಸೇರಿಸಿದ್ದರೆಂಬ ಅಸಮಾಧಾನ ಅವನಲ್ಲಿ ಗಾಢವಾಗಿ ಬೆಳೆದಿತ್ತು. ಇದೇ ವಿಷಯವಾಗಿ ಮನೆಯಲ್ಲಿ ಪದೇ ಪದೇ ಚರ್ಚೆ ಮತ್ತು ವಾಗ್ವಾದಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಘಟನೆಯ ದಿನವೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ವೇಳೆ ಕೋಪೋದ್ರಿಕ್ತನಾದ ಬಾಲಕ ಚಾಕುವಿನಿಂದ ತಂದೆ, ತಾಯಿ ಮತ್ತು ಅಕ್ಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಆತ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, “ಬಾಲಕ ಇನ್ನೂ ಅಪ್ರಾಪ್ತ ವಯಸ್ಸಿನವನಾಗಿದ್ದು, ಶಿಕ್ಷಣದ ಒತ್ತಡ ಹಾಗೂ ಮಾನಸಿಕ ಸಂಕಷ್ಟಗಳು ಅವನ ಮೇಲೆ ಗಂಭೀರ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಗುಣಮುಖನಾದ ಬಳಿಕ ತಜ್ಞರಿಂದ ಕೌನ್ಸಿಲಿಂಗ್ ಮತ್ತು ಮಾನಸಿಕ ಮೌಲ್ಯಮಾಪನ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.
ಈ ಘಟನೆ ಕೇವಲ ಒಂದು ಅಪರಾಧ ಪ್ರಕರಣವಾಗಿ ಮಾತ್ರವಲ್ಲ, ಮಕ್ಕಳ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕುಟುಂಬಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬ ಪ್ರಶ್ನೆಯನ್ನು ಸಮಾಜದ ಮುಂದೆ ತಂದಿದೆ. ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದು ಕೆಲವೊಮ್ಮೆ ಊಹಿಸಲಾರದ ಪರಿಣಾಮಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನೂ ಈ ದುರಂತ ನೀಡಿದೆ.