ಕೃಷ್ಣರಾಜಪೇಟೆ, ಮಂಡ್ಯ: ರೇವತಿ ನಕ್ಷತ್ರದ ಪವಿತ್ರ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಭೂದೇವಿ ಸಮೇತ ಶ್ರೀ ಲಕ್ಷ್ಮೀ ವರಹನಾಥ ಸ್ವಾಮಿ ಕ್ಷೇತ್ರ ಕಲ್ಲಹಳ್ಳಿಯಲ್ಲಿ ಸಾವಿರಾರು ಭಕ್ತರು ಸೇರಿ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು. ಭೂ ವೈಕುಂಠವೆಂದೇ ಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ ದಿನವಿಡೀ ಧಾರ್ಮಿಕ ಸಂಭ್ರಮ ಮನೆಮಾಡಿತ್ತು.
ರಾಜ್ಯದ ಮಾಜಿ ಸಚಿವ ಬೈರತಿ ಬಸವರಾಜು, ಚಲನಚಿತ್ರ ನಟ ರಾಘವೇಂದ್ರ ರಾಜಕುಮಾರ್ ಅವರ ಪತ್ನಿ ಮಂಗಳಾ ರಾಜಕುಮಾರ್, ಮನ್ಮುಲ್ನ ಮಾಜಿ ಅಧ್ಯಕ್ಷ ಎಂ.ಬಿ. ಹರೀಶ್ ಸೇರಿದಂತೆ ಹಲವು ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ವಿಶ್ವದಲ್ಲೇ ಅಪರೂಪವೆನಿಸಿರುವ 17 ಅಡಿ ಎತ್ತರದ ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿತ ಭೂವರಹನಾಥ ಸ್ವಾಮಿಯ ವಿಗ್ರಹಕ್ಕೆ ಸಾವಿರ ಲೀಟರ್ ಹಾಲು, ಎಳನೀರು, ಕಬ್ಬಿನ ರಸ, ಗಂಗಾಜಲ, ಜೇನುತುಪ್ಪ, ತುಪ್ಪ ಹಾಗೂ ವಿವಿಧ ಸುಗಂಧ ದ್ರವ್ಯಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಬಳಿಕ ಮಲ್ಲಿಗೆ, ಜಾಜಿ, ಸಂಪಿಗೆ, ಕಮಲ, ಗುಲಾಬಿ ಸೇರಿದಂತೆ 58ಕ್ಕೂ ಹೆಚ್ಚು ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಡಾ. ಶ್ರೀನಿವಾಸ ರಾಘವನ್, “ಭಕ್ತರ ಪ್ರಾರ್ಥನೆಗಳಿಗೆ ಸ್ಪಂದಿಸಿ ಅನುಗ್ರಹಿಸುತ್ತಿರುವ ಭೂವರಹನಾಥ ಸ್ವಾಮಿಯ ಮಹಿಮೆ ದಿನದಿಂದ ದಿನಕ್ಕೆ ಹೆಚ್ಚಿನ ಭಕ್ತರನ್ನು ಕ್ಷೇತ್ರದತ್ತ ಆಕರ್ಷಿಸುತ್ತಿದೆ. ಹಿರಣ್ಯಾಕ್ಷನ ಸಂಹಾರ ಹಾಗೂ ಭೂದೇವಿಯ ರಕ್ಷಣೆಯೊಂದಿಗೆ ಸಂಬಂಧ ಹೊಂದಿರುವ ರೇವತಿ ನಕ್ಷತ್ರದ ಮಹತ್ವವನ್ನು ಸ್ಮರಿಸಿ ಇಂದು ವಿಶೇಷ ಪೂಜೆ ಹಾಗೂ ಲೋಕಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
ಇದೇ ವೇಳೆ ದೇವಾಲಯದ ವಿಸ್ತರಣಾ ಯೋಜನೆ ಕುರಿತು ಮಾಹಿತಿ ನೀಡಿದ ಅವರು, ತಿರುಮಲ ತಿರುಪತಿ ದೇವಾಲಯದ ಮಾದರಿಯಲ್ಲಿ ಮೂರು ಪ್ರಕಾರಗಳ ಭವ್ಯ ದೇವಾಲಯವನ್ನು ಹೊಯ್ಸಳ ಶಿಲ್ಪಕಲಾ ಶೈಲಿಯಲ್ಲಿ ಸಂಪೂರ್ಣ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಎರಡನೇ ಪ್ರಕಾರದಲ್ಲಿ ನಾಲ್ಕು ದಿಕ್ಕುಗಳಲ್ಲಿ 56 ಅಡಿ ಎತ್ತರದ ರಾಜಗೋಪುರಗಳು ಹಾಗೂ ಮೂರನೇ ಪ್ರಕಾರದಲ್ಲಿ 176 ಕಂಬಗಳ ಮುಖಮಂಟಪ ಮತ್ತು 186 ಅಡಿ ಎತ್ತರದ ಬೃಹತ್ ರಾಜಗೋಪುರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ರಾಜಸ್ಥಾನ, ತಮಿಳುನಾಡು ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿರುವ ಶಿಲ್ಪಕಲಾ ತಜ್ಞರ ಮಾರ್ಗದರ್ಶನದಲ್ಲಿ ಆಧುನಿಕ ತಂತ್ರಜ್ಞಾನದ ನೆರವಿನಿಂದ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ದೇವಾಲಯವನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದ್ದು, ಶೀಘ್ರದಲ್ಲೇ ಸಂಸ್ಕೃತ ವೇದ ಪಾಠಶಾಲೆ ಆರಂಭಿಸುವ ಯೋಜನೆಯೂ ಇದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಸಿಹಿ ಪೊಂಗಲ್, ಬಿಸಿಬೇಳೆ ಬಾತ್, ಮೊಸರನ್ನ ಹಾಗೂ ಉಪ್ಪಿಟ್ಟು ಪ್ರಸಾದ ವಿತರಿಸಲಾಯಿತು. ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ್ದ 20 ಸಾವಿರಕ್ಕೂ ಹೆಚ್ಚು ಭಕ್ತರು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.