ಹೈದರಾಬಾದ್: ಕುಟುಂಬದ ಖರ್ಚುಗಳ ಜೊತೆಗೆ ತನ್ನ ಆದಾಯದ ಒಂದು ಭಾಗವನ್ನು ತವರು ಮನೆಗೆ ಕಳುಹಿಸುತ್ತಿದ್ದ ಪತ್ನಿಯ ಮೇಲಿನ ಅಸಮಾಧಾನವೇ ಕೊನೆಗೆ ಭೀಕರ ಹತ್ಯೆಗೆ ಕಾರಣವಾದ ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ವರ್ತನೆಯಿಂದ ಅಸಮಾಧಾನಗೊಂಡಿದ್ದ ಪತಿ, ಹೊರರಾಜ್ಯದಿಂದ ಹಂತಕರನ್ನು ಕರೆಸಿ ಸುಪಾರಿ ನೀಡಿ ಆಕೆಯನ್ನು ಕೊಲೆ ಮಾಡಿಸಿರುವ ಆರೋಪದಲ್ಲಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಬಿಹಾರ ಮೂಲದ ಅನಿಲ್ ಕುಮಾರ್ ಸಾಹ್ (38) ಎಂಬಾತ ತನ್ನ ಪತ್ನಿ ಮೀನಾ ದೇವಿ (36) ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಮೇ 31ರಂದು ಪೊಲೀಸರಿಗೆ ದೂರು ನೀಡಿದ್ದ ಅನಿಲ್, ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಪತ್ನಿಯನ್ನು ಅಪಹರಿಸಿ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದ.
ಅನಿಲ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ ಇದು ಅಪರಿಚಿತ ದುಷ್ಕರ್ಮಿಗಳ ಕೃತ್ಯವೆಂದು ಕಂಡುಬಂದಿದ್ದರೂ, ತನಿಖೆ ಮುಂದುವರಿದಂತೆ ಅನಿಲ್ ಹೇಳಿಕೆಯಲ್ಲಿ ಹಲವು ವೈರುಧ್ಯಗಳು ಕಂಡುಬಂದವು. ಇದರಿಂದ ಅನುಮಾನಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.
ಈ ನಡುವೆ ಮೀನಾ ದೇವಿಯ ಸಹೋದರ ನೀಡಿದ ಮಾಹಿತಿಯೂ ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿತು. ವಿಶೇಷ ತನಿಖಾ ತಂಡ ರಚಿಸಿ ಮೊಬೈಲ್ ಕರೆಗಳ ವಿವರ, ಹಣಕಾಸು ವ್ಯವಹಾರಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಪ್ರಕರಣದ ಹಿಂದಿನ ನಿಜಾಂಶ ಹೊರಬಿದ್ದಿದೆ.
ತನಿಖೆಯಲ್ಲಿ, ಪತ್ನಿ ತನ್ನ ಸಂಬಳದ ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದ ವಿಚಾರಕ್ಕೆ ದಂಪತಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎಂಬುದು ಗೊತ್ತಾಗಿದೆ. ಇದೇ ವಿಚಾರದಿಂದ ಕೋಪಗೊಂಡ ಅನಿಲ್, ಸುಮಾರು ₹2 ಲಕ್ಷ ಸುಪಾರಿ ನೀಡಿ ಬಿಹಾರದಿಂದ ಹಂತಕರನ್ನು ಕರೆಸಿ ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಹತ್ಯೆಯ ಹಿಂದೆ ಇರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.