ನವದೆಹಲಿ: ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ದೆಹಲಿಯಲ್ಲಿ ಕೇಂದ್ರ ಇಂಧನ, ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಮನೋಹರ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಹಲವು ಪ್ರಮುಖ ಯೋಜನೆಗಳಿಗೆ ತ್ವರಿತ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.
ರಾಜಧಾನಿಯಲ್ಲಿ ವಿವಿಧ ಕೇಂದ್ರ ಸಚಿವರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿರುವ ಶಿವಕುಮಾರ್, ವಿಶೇಷವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾರಿಗೆ ವ್ಯವಸ್ಥೆ ಬಲಪಡಿಸುವ ಯೋಜನೆಗಳಿಗೆ ಕೇಂದ್ರದ ಸಹಕಾರ ಕೋರಿದ್ದಾರೆ.
ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ಗೆ ಹಸಿರು ನಿಶಾನೆ ನೀಡುವಂತೆ ಮನವ
ಬೆಂಗಳೂರು ಮೆಟ್ರೋ ಮೂರನೇ ಹಂತದ ಭಾಗವಾಗಿ ಸುಮಾರು 44.65 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣದ ಯೋಜನೆ ಈಗಾಗಲೇ ಕೇಂದ್ರ ಮಟ್ಟದಲ್ಲಿ ಅನುಮೋದನೆ ಪಡೆದಿದ್ದು, ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ಅಂತಿಮ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಸುಮಾರು ₹9,700 ಕೋಟಿ ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸರ್ಕಾರವೇ ಸಂಪೂರ್ಣವಾಗಿ ಭರಿಸಲು ಮುಂದಾಗಿದೆ.
ಮೆಟ್ರೋ ಎರಡನೇ ಹಂತದ ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ ಕೋರಿಕೆ
ಬೆಂಗಳೂರು ಮೆಟ್ರೋ ಎರಡನೇ ಹಂತದ ಯೋಜನೆಗೆ ವರ್ಷಗಳ ಹಿಂದೆ ಅನುಮೋದನೆ ದೊರೆತಿದ್ದರೂ, ವೆಚ್ಚದಲ್ಲಿ ಗಣನೀಯ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಕೇಂದ್ರದ ಒಪ್ಪಿಗೆ ಅಗತ್ಯವಾಗಿದೆ. 72 ಕಿಲೋಮೀಟರ್ಗಿಂತ ಹೆಚ್ಚಿನ ಉದ್ದ ಹಾಗೂ 61 ನಿಲ್ದಾಣಗಳನ್ನು ಒಳಗೊಂಡಿರುವ ಈ ಯೋಜನೆಯ ವೆಚ್ಚ ಈಗ ₹40 ಸಾವಿರ ಕೋಟಿಗೂ ಅಧಿಕವಾಗಿದೆ. ಯೋಜನೆಯ ವೇಗದ ಅನುಷ್ಠಾನಕ್ಕಾಗಿ ಪರಿಷ್ಕೃತ ವೆಚ್ಚಕ್ಕೆ ಶೀಘ್ರ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ.
ಮೆಟ್ರೋ 3A ಹಂತಕ್ಕೂ ಅನುಮತಿ ನಿರೀಕ್ಷೆ
ಸರ್ಜಾಪುರ–ಹೆಬ್ಬಾಳ ಮಾರ್ಗವನ್ನು ಸಂಪರ್ಕಿಸುವ ಮೆಟ್ರೋ 3A ಹಂತವು ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಸುರಂಗ ಮಾರ್ಗ ಹಾಗೂ ಮೇಲ್ಸೇತುವೆ ಎರಡನ್ನೂ ಒಳಗೊಂಡಿರುವ ಈ ಯೋಜನೆಗೆ ಪರಿಷ್ಕೃತ ವಿವರ ಯೋಜನಾ ವರದಿ (DPR) ಈಗಾಗಲೇ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು, ತ್ವರಿತ ಅನುಮೋದನೆ ನೀಡುವಂತೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಬೆಂಗಳೂರು ಸುತ್ತಮುತ್ತ RRTS ಜಾಲ ವಿಸ್ತರಣೆಗೆ ಒತ್ತು: ರಾಜ್ಯದ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸಲು ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ತರಬೇಕೆಂಬ ಪ್ರಸ್ತಾವವನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಬೆಂಗಳೂರು–ಮೈಸೂರು, ಬೆಂಗಳೂರು–ತುಮಕೂರು, ಬೆಂಗಳೂರು–ಕನಕಪುರ, ಬೆಂಗಳೂರು–ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು–ಕೋಲಾರ ಮಾರ್ಗಗಳಲ್ಲಿ ಈ ವ್ಯವಸ್ಥೆ ಜಾರಿಯಾದರೆ ಸಂಚಾರದ ಅವಧಿ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂಬ ಅಭಿಪ್ರಾಯವನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿದೆ.