ಅಡುಗೆ ಅನಿಲ (LPG) ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಕಪ್ಪು ಮಾರುಕಟ್ಟೆ, ಸಬ್ಸಿಡಿ ದುರುಪಯೋಗ ಹಾಗೂ ಅನಗತ್ಯ ಸಿಲಿಂಡರ್ ಸಂಗ್ರಹಣೆಯನ್ನು ತಡೆಯುವ ಉದ್ದೇಶದಿಂದ ಪೆಟ್ರೋಲಿಯಂ ಸಚಿವಾಲಯ ಮತ್ತು ತೈಲ ಕಂಪನಿಗಳು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿವೆ.
ಹೊಸ ನಿಯಮದ ಪ್ರಕಾರ ಇನ್ಮುಂದೆ ಒಂದು ಮನೆಗೆ ಕೇವಲ ಒಂದೇ LPG ಸಂಪರ್ಕಕ್ಕೆ ಅವಕಾಶ ನೀಡಲಾಗುತ್ತದೆ. ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವ ಕುಟುಂಬಗಳು LPG ಸಂಪರ್ಕವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ.
ಯಾವುದೇ ಗ್ರಾಹಕರು ಹೊಸದಾಗಿ PNG ಸಂಪರ್ಕ ಪಡೆದರೆ, 30 ದಿನಗಳೊಳಗೆ ತಮ್ಮ LPG ಸಂಪರ್ಕವನ್ನು ಹಿಂತಿರುಗಿಸಬೇಕಾಗುತ್ತದೆ. ಈ ನಿಯಮ ಪಾಲಿಸದಿದ್ದರೆ ತೈಲ ಕಂಪನಿಗಳು LPG ಸಂಪರ್ಕವನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಬಹುದು.
PNG ಸಂಪರ್ಕ ಪಡೆದ ನಂತರ LPG ಸಂಪರ್ಕ ಹಿಂತಿರುಗಿಸುವ ಗ್ರಾಹಕರಿಗೆ ಸರ್ಕಾರ ವರ್ಗಾವಣೆ ವೋಚರ್ ನೀಡಲಿದೆ. ಭವಿಷ್ಯದಲ್ಲಿ PNG ಸೌಲಭ್ಯವಿಲ್ಲದ ಪ್ರದೇಶಕ್ಕೆ ಸ್ಥಳಾಂತರವಾದರೆ ಈ ವೋಚರ್ ಮೂಲಕ ಸುಲಭವಾಗಿ ಹೊಸ LPG ಸಂಪರ್ಕವನ್ನು ಮರುಪಡೆಯಬಹುದು.
ಇದಲ್ಲದೆ, ಸಿಲಿಂಡರ್ಗಳ ದುರುಪಯೋಗ ತಡೆಯಲು ಬುಕಿಂಗ್ ನಡುವಿನ ಕನಿಷ್ಠ ಅವಧಿಯನ್ನು ಹೆಚ್ಚಿಸಲಾಗಿದೆ. ಒಂದು ಸಿಲಿಂಡರ್ ಪಡೆದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಕನಿಷ್ಠ 25 ದಿನಗಳ ಅಂತರ ಕಡ್ಡಾಯವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಈ ಅವಧಿಯನ್ನು 45 ದಿನಗಳಿಗೆ ನಿಗದಿಪಡಿಸಲಾಗಿದೆ.
ಸಿಲಿಂಡರ್ ವಿತರಣಾ ಪ್ರಕ್ರಿಯೆಯನ್ನೂ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ. ಇನ್ನು ಮುಂದೆ ಸಿಲಿಂಡರ್ ವಿತರಣೆಯ ವೇಳೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನೀಡಿದ ನಂತರವೇ ವಿತರಣೆ ಪೂರ್ಣಗೊಳ್ಳಲಿದೆ. ಇದರಿಂದ ನಕಲಿ ಬುಕಿಂಗ್ ಮತ್ತು ಮೋಸದ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ.
ಉಜ್ವಲ ಯೋಜನೆಯ ಫಲಾನುಭವಿಗಳು ಆಧಾರ್ ಆಧಾರಿತ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಗ್ಯಾಸ್ ಏಜೆನ್ಸಿಯಲ್ಲಿ ಸರಿಯಾದ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ಸರ್ಕಾರದ ಸಬ್ಸಿಡಿ ಹಣ ಯಾವುದೇ ತೊಂದರೆಯಿಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
Tags:
#LPG #GasCylinder #LPGRules #GasUpdate #OTP #PNG #GasSubsidy #UjjwalaYojana #IndiaNews #KannadaNews #BreakingNews #LPGConnection #GasBooking #KarunaaduTimes #LatestNews #GovernmentUpdate #GasUsers #CylinderUpdate #SubsidyNews #TrendingNews