ಬೆಂಗಳೂರು: ನಗರದಲ್ಲಿ ರಾಜ್ಯಪಾಲರ ವಾಹನ ಸಂಚಾರದ (ಜೀರೋ ಟ್ರಾಫಿಕ್) ಹಿನ್ನೆಲೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದು, ಸುಮಾರು 30 ನಿಮಿಷಗಳ ಕಾಲ ವಾಹನ ಸವಾರರು ರಸ್ತೆಯಲ್ಲೇ ಸಿಲುಕುವಂತಾಯಿತು. ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಈಗಾಗಲೇ ಅಂಡರ್ಪಾಸ್ ನಿರ್ಮಾಣ ಕಾಮಗಾರಿಗಳಿಂದಾಗಿ ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದ್ದು, ಇದರ ನಡುವೆ ವಿಐಪಿ ಸಂಚಾರಕ್ಕಾಗಿ ವಿಧಿಸಲಾದ ತಾತ್ಕಾಲಿಕ ನಿರ್ಬಂಧವು ಪರಿಸ್ಥಿತಿಯನ್ನು ಮತ್ತಷ್ಟು ಕದಡಿದೆ. ಈ ಸಂಚಾರ ದಟ್ಟಣೆಯಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕರ ಮನ ಕಲಕುದಿ. ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿರುವ ಇಂತಹ ತುರ್ತು ಸಂದರ್ಭಗಳಲ್ಲಿ, ಈ "ಜೀರೋ ಟ್ರಾಫಿಕ್" ಪ್ರೋಟೋಕಾಲ್ ಸಾಮಾನ್ಯ ಜನರ ಜೀವಕ್ಕೆ ಸಂಚಕಾರ ತರುತ್ತಿದೆಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಇಂತಹ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದ ಉದಾಹರಣೆಗಳಿವೆ. ವಿಐಪಿ ಸಂಚಾರದ ಈ ನಿಯಂತ್ರಣ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರ ಆಕ್ರೋಶ ಪದೇ ಪದೇ ವ್ಯಕ್ತವಾಗುತ್ತಿದ್ದರೂ, ನಗರದಲ್ಲಿ "ಜೀರೋ ಟ್ರಾಫಿಕ್" ನಿಯಮಗಳು ಮಾತ್ರ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯುತ್ತಲೇ ಇವೆ.
ಈ ನಿರ್ಬಂಧಗಳಿಂದಾಗಿ ಸಾವಿರಾರು ನಿತ್ಯ ಪ್ರಯಾಣಿಕರು ಪರದಾಡುವಂತಾಗಿದ್ದು, ತುರ್ತು ವೈದ್ಯಕೀಯ ಸೇವೆಗಳಿಗೂ ಅಡ್ಡಿಯಾಗುವ ಆತಂಕ ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದ್ದು, "ವಿಐಪಿಗಳಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯವೇ?" ಎಂಬ ಟೀಕೆಗಳು ಕೇಳಿಬರುತ್ತಿವೆ. ಗಣ್ಯರ ಸಂಚಾರಕ್ಕಾಗಿ ಜಾರಿಯಾಗುವ ಈ "ಜೀರೋ ಟ್ರಾಫಿಕ್" ಪ್ರೋಟೋಕಾಲ್ ಇದೀಗ ಮತ್ತೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿದೆ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರ ಸಂಚಾರದ ವೇಳೆ, ಆಂಬುಲೆನ್ಸ್ನಂತಹ ತುರ್ತು ವಾಹನಗಳನ್ನೂ ತಡೆಹಿಡಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ಟ್ರಾಫಿಕ್ ನಿರ್ವಹಣೆ ದೊಡ್ಡ ಸವಾಲು
ತುರ್ತು ಸೇವೆಗಳಾದ ಆಂಬುಲೆನ್ಸ್ ಸಂಚಾರಕ್ಕೆ ಆದ್ಯತೆ ನೀಡುವ ಪ್ರಯತ್ನಗಳು ನಡೆದಿದ್ದರೂ, ವಿಐಪಿ ಸಂಚಾರದ ಪ್ರಭಾವವು ನಗರದ ಟ್ರಾಫಿಕ್ ನಿರ್ವಹಣೆಯಲ್ಲಿ ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ. ಈ ಘಟನೆಯು ವಿಐಪಿ ಸಂಚಾರದ ವೇಳೆ ಸಾಮಾನ್ಯ ಜನರ ದೈನಂದಿನ ಚಲನವಲನಗಳಿಗೆ ಉಂಟಾಗುವ ಅಡಚಣೆಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ವಿಶೇಷವಾಗಿ ಹೆಚ್ಚಿನ ದಟ್ಟಣೆಯ ಸಮಯ(ಪೀಕ್ ಅವರ್) ಮತ್ತು ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಇಂತಹ ನಿರ್ಬಂಧಗಳು ನಾಗರಿಕರ ಬದುಕನ್ನು ಮತ್ತಷ್ಟು ತೊಂದರೆಯನ್ನು ಅನುಭವಿಸುವಂತೆ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ಗಣ್ಯರ ಭದ್ರತೆ ಅತ್ಯಂತ ಮುಖ್ಯವಾದದ್ದಾದರೂ, ತುರ್ತು ಸಂದರ್ಭಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೂ ಸಮಾನ ಆದ್ಯತೆ ನೀಡಬೇಕಲ್ಲವೇ ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ