ಗುವಾಹಟಿ: ಈಶಾನ್ಯ ಭಾರತದ ಅಶಾಂತ ರಾಜ್ಯ ಮಣಿಪುರದಲ್ಲಿ ಶಾಂತಿ ನೆಲೆಸುವ ಲಕ್ಷಣಗಳು ಕಾಣಿಸುತ್ತಿದ್ದಂತೆಯೇ ಮತ್ತೆ ಹಿಂಸಾಚಾರದ ಕಿಡಿ ಹೊತ್ತಿಕೊಂಡಿದೆ. ಕಾಂಗ್ಪೋಕ್ಪಿ ಜಿಲ್ಲೆಯ ಸೈತು-ಗಂಫಜೋಲ್ ಉಪವಿಭಾಗದ ಲೋಯಿಬೋಲ್ ಖುಲ್ಲೆನ್ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದ ಭೀಕರ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಕುಕಿ ಸಮುದಾಯದ ಗ್ರಾಮಸ್ಥರು ಸಾವನ್ನಪ್ಪಿದ್ದು, ಏಳು ಮನೆಗಳನ್ನು ದುಷ್ಕರ್ಮಿಗಳು ಬೆಂಕಿಗಾಹುತಿ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪು ಗ್ರಾಮಕ್ಕೆ ನುಗ್ಗಿ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಗ್ರಾಮಸ್ಥರು ಆತಂಕದಿಂದ ಓಡಿಹೋಗಲು ಯತ್ನಿಸಿದರೂ, ದಾಳಿಕೋರರು ನಿರ್ದಯವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ದಾಳಿಯಲ್ಲಿ ಲೆತ್ಖೊಂಗಮ್ ಹಾವೊಕಿಪ್, ಅವರ ಪತ್ನಿ ತಿನ್ಮರಿ ಹಾವೊಕಿಪ್ ಹಾಗೂ ಜಂಗ್ಮಿನ್ಲಾಲ್ ಹಾವೊಕಿಪ್ ಮೃತಪಟ್ಟಿದ್ದಾರೆ. ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಸಶಸ್ತ್ರ ಸಂಘಟನೆಗಳ ವಿರುದ್ಧ ಗಂಭೀರ ಆರೋಪ
ಕುಕಿ ಸಮುದಾಯದ ಪ್ರಮುಖ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ (KIM), ಈ ದಾಳಿಗೆ ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್ (NSCN-IM) ಹಾಗೂ ಅದರ ಬೆಂಬಲಿತ ಸಂಘಟನೆಯಾದ ಜೆಲಿಯಾಂಗ್ರಾಂಗ್ ಯುನೈಟೆಡ್ ಫ್ರಂಟ್ (ZUF) ಹೊಣೆ ಎಂದು ಆರೋಪಿಸಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ KIM, ಇದು ಕೇವಲ ಹತ್ಯೆಯಲ್ಲ, ನಾಗರಿಕರ ವಿರುದ್ಧದ ಕ್ರೂರ ಮಾನವ ಹಕ್ಕು ಉಲ್ಲಂಘನೆ ಎಂದು ಹೇಳಿದೆ. ದಾಳಿಯಲ್ಲಿ ಮೂರು ಅಮಾಯಕ ಜೀವಗಳು ಬಲಿಯಾಗಿರುವುದರ ಜೊತೆಗೆ ಏಳು ಮನೆಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಕುಟುಂಬಗಳು ತಮ್ಮ ಸರ್ವಸ್ವವನ್ನೇ ಕಳೆದುಕೊಂಡಿವೆ ಎಂದು ತಿಳಿಸಿದೆ.
"ಅಮಾಯಕ ನಾಗರಿಕರ ಮೇಲೆ ದಾಳಿ ಖಂಡನೀಯ"
ಪ್ರಕಟಣೆ ಹೊರಡಿಸಿರುವ KIM, "ಈ ಹಿಂಸಾತ್ಮಕ ಕೃತ್ಯದಿಂದ ಮೂವರು ನಿರಪರಾಧಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮನೆಗಳು, ಆಸ್ತಿಪಾಸ್ತಿ ಮತ್ತು ಜೀವನೋಪಾಯ ನಾಶವಾಗಿದೆ. ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನಡೆಸುವ ಇಂತಹ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮತ್ತೆ ಉದ್ವಿಗ್ನಗೊಂಡ ಮಣಿಪುರ
ಕಳೆದ ಎರಡು ವರ್ಷಗಳಿಂದ ಮಣಿಪುರದಲ್ಲಿ ವಿವಿಧ ಸಮುದಾಯಗಳ ನಡುವಿನ ಸಂಘರ್ಷಗಳು ರಾಜ್ಯದ ಶಾಂತಿಯನ್ನು ಕದಡುತ್ತಿವೆ. ಈಗ ಮತ್ತೊಮ್ಮೆ ನಡೆದಿರುವ ಈ ದಾಳಿ, ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದ್ದು, ಭದ್ರತಾ ಪಡೆಗಳು ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿವೆ. ದಾಳಿಯ ಹಿಂದಿರುವವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.