ಬೆಂಗಳೂರು: ದೇಶದ ಪ್ರಮುಖ ಚಿನ್ನಾಭರಣ ರಫ್ತು ಸಂಸ್ಥೆಗಳಲ್ಲಿ ಒಂದಾದ ರಾಜೇಶ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ವಿರುದ್ಧ ಭಾರತೀಯ ಷೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮಹತ್ವದ ಕ್ರಮ ಕೈಗೊಂಡಿದೆ. ಸುಮಾರು 15 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಫ್ತು ವಹಿವಾಟುಗಳನ್ನು ತಪ್ಪಾಗಿ ತೋರಿಸಿ ಹೂಡಿಕೆದಾರರನ್ನು ದಾರಿ ತಪ್ಪಿಸಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆ, ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮೆಹ್ತಾ ವಿರುದ್ಧ ಸೆಬಿ ಮಧ್ಯಂತರ ಆದೇಶ ಹೊರಡಿಸಿದೆ.
ಸೆಬಿಯ ಆದೇಶದಂತೆ, ತನಿಖೆ ಪೂರ್ಣಗೊಳ್ಳುವವರೆಗೆ ರಾಜೇಶ್ ಎಕ್ಸ್ಪೋರ್ಟ್ಸ್ ಹಾಗೂ ಅದರ ಪ್ರವರ್ತಕ ರಾಜೇಶ್ ಮೆಹ್ತಾ ಅವರಿಗೆ ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಸದಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗಿದ್ದು, ಗುರುವಾರ ರಾಜೇಶ್ ಎಕ್ಸ್ಪೋರ್ಟ್ಸ್ ಷೇರುಗಳು ಶೇಕಡಾ 5 ರಷ್ಟು ಕುಸಿದು ಲೋವರ್ ಸರ್ಕ್ಯೂಟ್ ತಲುಪಿದವು. ಷೇರು ಬೆಲೆ 104.65 ರೂಪಾಯಿಗೆ ಇಳಿದಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯ 3,100 ಕೋಟಿ ರೂಪಾಯಿಗಿಂತ ಕೆಳಗೆ ಇಳಿದಿದೆ.
ಆದರೆ, ಸೆಬಿಯ ಆರೋಪಗಳನ್ನು ಕಂಪನಿ ಸಂಪೂರ್ಣವಾಗಿ ತಳ್ಳಿ ಹಾಕಿದೆ. ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಸ್ಪಷ್ಟೀಕರಣದಲ್ಲಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು ವಾಸ್ತವಾಂಶಗಳಿಗೆ ವಿರುದ್ಧವಾಗಿದ್ದು, ಶೀಘ್ರದಲ್ಲೇ ಸಂಪೂರ್ಣ ವಿವರಗಳೊಂದಿಗೆ ಮತ್ತೊಂದು ಅಧಿಕೃತ ಸ್ಪಷ್ಟೀಕರಣ ನೀಡಲಾಗುವುದು ಎಂದು ತಿಳಿಸಿದೆ.
ಇದಾಗ್ಯೂ, ಜೂನ್ 3, 2026 ರಂದು ಸೆಬಿಯಿಂದ ಬಂದ ಮಧ್ಯಂತರ ಆದೇಶವನ್ನು ಕಂಪನಿ ಅಧಿಕೃತವಾಗಿ ಒಪ್ಪಿಕೊಂಡಿದೆ. ತನಿಖೆ ಮುಂದುವರಿದಿರುವುದರಿಂದ ಈ ಪ್ರಕರಣವು ಹೂಡಿಕೆದಾರರು ಹಾಗೂ ಷೇರು ಮಾರುಕಟ್ಟೆಯ ಗಮನ ಸೆಳೆದಿದೆ.
ಗಮನಾರ್ಹ ಸಂಗತಿಯೆಂದರೆ, ಡಿಸೆಂಬರ್ 2025ರಲ್ಲಿ ದಾಖಲಾದ ಮಟ್ಟದೊಂದಿಗೆ ಹೋಲಿಸಿದರೆ, ಕಂಪನಿಯ ಷೇರು ಮೌಲ್ಯ ಈಗಾಗಲೇ ಶೇ.56 ರಷ್ಟು ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಸೆಬಿಯ ತನಿಖೆ ಹಾಗೂ ಕಂಪನಿಯ ಸ್ಪಷ್ಟೀಕರಣ ಈ ಪ್ರಕರಣದ ದಿಕ್ಕನ್ನು ನಿರ್ಧರಿಸಲಿವೆ.