ಕಾರಿನ ಡಿಕ್ಕಿಯಲ್ಲಿ ಸಿಲುಕಿ 3 ವರ್ಷದ ಮಗು ಸಾವು; ಹುಡುಕಾಡಿದ ಪೋಷಕರಿಗೆ ಆಘಾತ
ಯಾದಗಿರಿ ಜಿಲ್ಲೆಯ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ಕಾರಿನ ಡಿಕ್ಕಿಯೊಳಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಗ್ರಾಮದ ಕೊಟ್ಟೂರೇಶ್ವರ ಪೂಜ್ಯರ ಅವರ ಪುತ್ರ ಬಸವಪ್ರಭು ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿಯ ಪ್ರಕಾರ, ಬಸವಪ್ರಭು ತನ್ನ ಸ್ನೇಹಿತರೊಂದಿಗೆ ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲೇ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿ ತೆರೆದಿರುವುದನ್ನು ಗಮನಿಸಿದ್ದಾನೆ. ಆಟದ ಮಧ್ಯೆ ಡಿಕ್ಕಿಯೊಳಗೆ ಪ್ರವೇಶಿಸಿದ ಬಾಲಕ, ಆಕಸ್ಮಿಕವಾಗಿ ಅದರೊಳಗೆ ಸಿಲುಕಿಕೊಂಡಿದ್ದಾನೆ. ಬಳಿಕ ಡಿಕ್ಕಿಯ ಬಾಗಿಲು ತಾನಾಗಿಯೇ ಮುಚ್ಚಿ ಲಾಕ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಳಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ಗಾಬರಿಗೊಂಡ ಬಾಲಕ ಹೊರಬರಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಾರಿನ ಸೀಟಿನ ಸಂದಿಯಲ್ಲಿ ತಲೆ ಸಿಲುಕಿಕೊಂಡಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮಧ್ಯಾಹ್ನದ ವೇಳೆಗೆ ಮಗು ಕಾಣಿಸದಿದ್ದಾಗ ಪೋಷಕರು ಮತ್ತು ಗ್ರಾಮಸ್ಥರು ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಹಲವು ಗಂಟೆಗಳ ಕಾಲ ಹುಡುಕಿದರೂ ಮಗು ಪತ್ತೆಯಾಗದ ಹಿನ್ನೆಲೆಯಲ್ಲಿ ಮನೆಯ ಆವರಣದಲ್ಲಿ ನಿಂತಿದ್ದ ಕಾರನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನ ಡಿಕ್ಕಿಯೊಳಗೆ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ತಕ್ಷಣ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರು ಕೂಡ ದುಃಖ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಮಕ್ಕಳು ಆಟವಾಡುವ ಸ್ಥಳಗಳಲ್ಲಿ ವಾಹನಗಳ ಡಿಕ್ಕಿ ಮತ್ತು ಬಾಗಿಲುಗಳನ್ನು ಸುರಕ್ಷಿತವಾಗಿ ಮುಚ್ಚಿಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.